ಚೌಕಿಮನೆ.
ಕರಾವಳಿಯ ಅರೇ ಸಂಜೆಯ ಸಣ್ಣ ಕತ್ತಲ ನಡುವೆ, ಮಿನುಗುವ ರಂಗಸ್ಥಳದ ಹಿಂಬದಿಯಲ್ಲಿ ಇರುವ ಮನೆ.
ಮೇಳದವರು ಹೋದಲೆಲ್ಲಾ ಹೋಗುವ ಮನೆ.
ಆಟ ವಿದ್ದ ಊರಿನಲ್ಲಿ ಸಂಜೆಯ ಹೊತ್ತಿಗೆ ಪ್ರತ್ಯಕ್ಷ ವಾಗಿ ಬೆಳಗಿನಹೊತ್ತಿಗೆ ಮಾಯವಾಗುವ ಬಣ್ಣದ ಮನೆ.
ವಿಳಾಸವಿಲ್ಲದ ಮನೆ;
ರಸ್ತೆ ಬಡಿಯಲೋ, ಗದ್ದೆ ಬಾಯ್ಲಲೊ, ಶಾಲೆಯ ಒಳಗೋ, ಕಡಲ ತೀರದಲೊ ಎಲ್ಲೆಂದರಲ್ಲಿ ತಲೆ ಎತ್ತಿ ನಿಲುವ ಮನೆ.
ಒಳ ಹೊಕ್ಕುವ ಜನ ಸಾಮಾನ್ಯರನ್ನು, ಹೊರಬರುವಾಗ ಯಕ್ಷ ಗಂಧರ್ವರಾಗಿ ಮಾರ್ಪಡಿಸುವ ವಿಸ್ಮಯದ ಮನೆ.
ಅತ್ತಿತ್ತ ಓಡಾಡುವ ಗೆಜ್ಜಿಗಳು, ನಡುವಲ್ಲಿ ಬೆಳಕಿನ ಎರಡು ಬದಿಯಲಿ ಎದುರು ಬದುರಾಗಿ ಕುಳಿತು,ಬಣ್ಣ ತಟ್ಟುವ ಕೈಗಳು, ಕನ್ನಡಿಯೊಳಗೆ ತೀಡಿಕೊಳುವ ಹುಬ್ಬುಗಳು, ಮುಖವರ್ಣಿಕೆ ಬರೆಯುವ ಕುಂಚಗಳು, ಕೆಂಪು, ಬಿಳಿ,ಹಳದಿ, ಕಪ್ಪು ಬಣದ ಕರಡಿಕೆಗಳು, ಛಾವಣಿ ಇಂದ ಜೋತಾಡುವ ಕಸೆ, ಇಜಾರುಗಳು. ಧಗಲೆ, ತೋಳಬಂದಿ, ವಡ್ಯಾಣ,ಕವಚ,ಕ್ಯಾದಗಿ, ಮುಂದಲೆ, ಎಂಬ ಹೇಸಿಟ್ಟುಕೊಂಡು ಬಿಗುವ ವೇಷ, ಭೂಷಣಗಳ ಒಂದು ಸುಂದರ ಸಂಯೋಜಿತ ಗಲಭೆ ಈ ಚೌಕಿಮನೆ.














